ಎಂ.ಬಿ.ಎಮಿನೋ :-

ದ್ರಾವಿಡ ಭಾಷಾವಿಜ್ಞಾನ ಕ್ಷೇತ್ರದಲ್ಲಿ ಪ್ರಸಿದ್ಧರಾದ ವಿದ್ವಾಂಸರಲ್ಲಿ ಎಮಿನೋ ಎಂ.ಬಿ. ಒಬ್ಬ. ಮರ್ರೆ ಬಾರ್ನಸನ್ ಎಮಿನೋ ಪೂರ್ಣನಾಮ. ಕಾಲ್ಡ್‍ವೆಲ್‍ನಿಂದ ಆರಂಭವಾದ ದ್ರಾವಿಡ ಭಾಷಾವಿಜ್ಞಾನದ ಅಧ್ಯಯನ ಎಲ್.ವಿ.ರಾಮಸ್ವಾಮಿ ಅಯ್ಯರ್, ಜೂಲ್‍ಸ್ ಬ್ಲಾಕ್, ಬರೋ ಹಾಗೂ ಎಮಿನೋ-ಇವರಿಂದ ಸುಭದ್ರ ಬುನಾದಿಯನ್ನು ಪಡೆಯಿತು. ಗ್ರಾಂಥಿಕ ಭಾಷೆಗಳಾದ ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಮಾತ್ರವಲ್ಲದೆ ಇದೇ ಪರಿವಾರಕ್ಕೆ ಸೇರಿದ ಹತ್ತಾರು ಲಿಪಿರಹಿತ ಆದಿವಾಸಿ ಭಾಷೆಗಳ ಕುರಿತು (ನೀಲಗಿರಿ, ಮಧ್ಯ ಹಾಗೂ ಪೂರ್ವ ಭಾರತದ ಕಾಡುಗಳು, ಬಲೂಚಿಸ್ತಾನ ಮುಂತಾದೆಡೆಗಳಲ್ಲಿ ಕಂಡುಬರುವುವು) ವೈಜ್ಞಾನಿಕ ಅಧ್ಯಯನ ಹಾಗೂ ಸಂಶೋಧನೆ ನಡೆಸಿ ಅವುಗಳ ವರ್ಗೀಕರಣ ಮಾಡಿ ಅದರ ಆಧಾರದ ಮೇಲೆ ಮೂಲ ದ್ರಾವಿಡ ಭಾಷೆಯ ಲಕ್ಷಣಗಳನ್ನು ಗುರುತಿಸಲು ಸಾಧ್ಯವಾಗುವಂತೆ ಮಾಡಿದ ಕೀರ್ತಿ ಎಮಿನೋ ಅವರಿಗೆ ಸಂದಿದೆ. ಟಿ. ಬರೋ ಅವರ ಜೊತೆಗೂಡಿ ಈತ ರಚಿಸಿದ "ದ್ರಾವಿಡ ಭಾಷೆಗಳ ವ್ಯುತ್ಪತ್ತಿ ಪದಕೋಶ" ದ್ರಾವಿಡ ಭಾಷಾವಿಜ್ಞಾನದ ಪ್ರಮುಖ ಕೃತಿಯಾಗಿದ್ದು ಸಂಶೋಧಕರಿಗೆ ಮಾರ್ಗದರ್ಶಿ. 

	ಕೆನಡ ದೇಶದ ಲೂಸೆನ್ ಬರ್ಗ್‍ನಲ್ಲಿ ಫೆಬ್ರವರಿ 28, 1904 ರಲ್ಲಿ ಜನಿಸಿದ ಎಮಿನೋ ತಮ್ಮ ಸ್ವಂತ ಊರಿನಲ್ಲಿಯೇ ಪ್ರಾರಂಭಿಕ ಶಿಕ್ಷಣವನ್ನು ಮುಗಿಸಿ 1923 ರಲ್ಲಿ ಹ್ಯಾಲಿಫಾಕ್ಸಿನ ಡಾಲ್‍ಹೌಸಿ ವಿಶ್ವವಿದ್ಯಾಲಯದಲ್ಲಿ ಪ್ರಾಚೀನ ಸಾಹಿತ್ಯವನ್ನು ಐಚ್ಛಿಕವಾಗಿ ಕಲಿತು ಪದವೀಧರಾದರು. ಮುಂದೆ ಮೂರು ವರ್ಷ ಆಕ್ಸ್‍ಫರ್ಡ್ ವಿಶ್ವವಿದ್ಯಾಲಯದಲ್ಲಿ ಪ್ರಾಚೀನ ಸಾಹಿತ್ಯದಲ್ಲಿ ಉನ್ನತ ವ್ಯಾಸಂಗ ಪಡೆದರು. ತರುವಾಯ ನ್ಯೂಹೇವನ್ನಿನ ಯೇಲ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಯಾಗಿ ಎಜರ್‍ಟನ್, ಸ್ಟರ್ಟವಂಟ್ ಪ್ರೊಕೋಸ್ಟ್ ಮುಂತಾದ ಪ್ರಸಿದ್ಧ ಭಾಷಾತಜ್ಞರ ಬಳಿ ಐದಾರು ವರ್ಷ ಸಂಸ್ಕøತ, ಗ್ರೀಕ್, ಲ್ಯಾಟಿನ್ ಮುಂತಾದ ಭಾಷೆಗಳ ಕುರಿತು ಆಳವಾದ ಅಧ್ಯಯನ ನಡೆಸಿ ಇಂಡೋ-ಯುರೋಪಿಯನ್ ಭಾಷಾವಿಜ್ಞಾನದಲ್ಲಿ ಪಾಂಡಿತ್ಯವನ್ನು ಗಳಿಸಿ, ಸ್ನಾತಕೋತ್ತರ ಸಂಶೋಧನ ಪ್ರಶಸ್ತಿಯನ್ನು ಪಡೆದರು. ಸಂಶೋಧಕರಾಗಿರುವಾಗಲೇ ಲ್ಯಾಟಿನ್ ಭಾಷೆಯ ಪ್ರಾಧ್ಯಾಪಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದರು. ಸಂಶೋಧನ ಪ್ರಶಸ್ತಿ ಪಡೆದ ಮೇಲೂ ಅದೇ ವಿಶ್ವವಿದ್ಯಾನಿಲಯದಲ್ಲಿ ಸಂಶೋಧಕರಾಗಿ ಕೆಲಸಮಾಡಿದರು. ವಿಶ್ವವಿದ್ಯಾನಿಲಯ, ಅಮೆರಿಕನ್ ಕೌನ್ಸಿಲ್ ಆಫ್ ಲರ್ನೆಡ್ ಸೊಸೈಟೀಸ್, ಅಮೆರಿಕನ್ ಫಿಲಸಾಫಿಕಲ್ ಸೊಸೈಟಿ ಮುಂತಾದ ಸಂಘ ಸಂಸ್ಥೆಗಳು ಇವರ ಸಂಶೋಧನಾ ಕಾರ್ಯಕ್ಕೆ ಪ್ರೋತ್ಸಾಹ ನೀಡಿದವು. ಇವರಿಗೆ ಅಮೆರಿಕದ ಭಾಷಾವಿಜ್ಞಾನಿಗಳಾದ ಪ್ರಮುಖ ಫ್ರಾಬೋಅಸ್, ಸಪೀರ್ ಮತ್ತು ಬ್ಲೂಮ್‍ಫೀಲ್ಡ್-ಅವರಲ್ಲಿ ಶಿಷ್ಯವೃತ್ತಿ ಲಭಿಸಿತು. 1938-39 ರಲ್ಲಿ ಯೇಲ್ ವಿಶ್ವವಿದ್ಯಾಲಯದ ಮಾನವವಿಜ್ಞಾನ ಮತ್ತು ಭಾಷಾವಿಜ್ಞಾನಗಳ ಉಪಾಧ್ಯಾಯರಾಗಿ ಸೇವೆ ಸಲ್ಲಿಸಿ 1940 ನಂತರ ಬಕ್ರ್ಲಿಯಲ್ಲಿರುವ ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದ ಸಂಸ್ಕøತ ಹಾಗೂ ಸಾಮಾನ್ಯ ಭಾಷಾವಿಜ್ಞಾನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿಯೂ ವಿಭಾಗದ ಅಧ್ಯಕ್ಷ ಹಾಗೂ ಪ್ರಧಾನ ಪ್ರಾಧ್ಯಾಪಕರಾಗಿಯೂ ಕಾರ್ಯ ನಿರ್ವಹಿಸಿದರು. ಅಲ್ಲದೆ ಈ ಮಧ್ಯೆ ತಮ್ಮ ಸಂಯೋಜಿತ ಕಾರ್ಯಗಳಿಗಾಗಿ ಭಾರತ, ವಿಯಟ್ನಾಂ, ಬ್ರಿಟನ್ ಮುಂತಾದ ದೇಶಗಳಿಗೂ ಭೇಟಿ ನೀಡಿದರಲ್ಲದೇ ಅಮೆರಿಕದ ಭಾಷಾವಿಜ್ಞಾನ ಸಂಸ್ಥೆಯ ಅಧ್ಯಕ್ಷರಾಗಿಯೂ ಭಾರತದ ಭಾಷಾವಿಜ್ಞಾನದ ಬೇಸಗೆ ಶಾಲೆಗಳ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿರುವರು. 

	1931-32 ರಲ್ಲಿ ಎಜರ್‍ಟನ್ ಮತ್ತು ಬ್ಲೂಮ್‍ಫೀಲ್ಡರೊಡಗೂಡಿ `ವೇದಿಕ್ ವೇರಿಯಂಟ್ಸ್ ಅಥವಾ `ವೇದಗಳ ಪಾಠಭೇದಗಳು ಕೃತಿಯ ಮೂರನೇಯ ಭಾಗವನ್ನು ಎಮಿನೋ ಪ್ರಕಟಿಸಿದರು. ಅಮೆರಿಕದ ವಿವಿಧ ಗ್ರಂಥಾಲಯಗಳಿಗೆ ಭೇಟಿ ನೀಡಿ ಭಾರತೀಯ ಭಾಷೆಗಳಲ್ಲಿನ ಪ್ರಕಟಿತ ಕೃತಿ ಹಾಗೂ ಭಾಷಾಂತರ ಕೃತಿಗಳ ಪಟ್ಟಿಯನ್ನು ಸಂಗ್ರಹಿಸಿ ಪ್ರಕಟಿಸಿದರು. 

	1933 ರಲ್ಲಿ ಅಜ್ಞಾತ ದ್ರಾವಿಡ ಭಾಷೆಗಳ ರೂಪ ನಿಷ್ಕರ್ಷೆ ಹಾಗೂ ವಿವರಣಾ ವ್ಯಾಕರಣಗಳನ್ನು ರಚಿಸುವ ಉದ್ದೇಶದಿಂದ ಭಾರತಕ್ಕೆ ಬಂದು ಸತತ ಮೂರು ವರ್ಷ ಕಾಲ ಇಲ್ಲಿನ ಗುಡ್ಡಗಾಡುಗಳಲ್ಲಿನ ಆದಿವಾಸಿಗಳ ಜತೆ ಅಲೆದಾಡಿ ಭಾಷಾ ವಿಜ್ಞಾನಿಗಳ ಕಣ್ಣಿಗೆ ಇನ್ನೂ ಅಗೋಚರವಾಗಿದ್ದ ತೊದ, ಕೋತ, ಕೊಡವ, ಕೊಲಾಮಿ ಮುಂತಾದ ಭಾಷೆಗಳ ಆಡುನುಡಿಗಳನ್ನು ಸಂಗ್ರಹಿಸಿದರು. ಈ ಮಹತ್ವದ ಸಂಶೋಧನೆಯ ಫಲವಾಗಿ ಕೋತ ಟೆಕ್‍ಸ್ಟ್ಸ್ ಆವರಣದಲ್ಲಿ ಎರಲಿ (ಕೋತ್‍ಪಠ್ಯಗಳು) `ನಾಲ್ಕು ಸಂಪುಟಗಳು, ಕೊಲಾಮಿ-ಒಂದು ದ್ರಾವಿಡ ಭಾಷೆ ಕೃತಿ ಹಾಗೂ ಅನೇಕ ಸಂಶೋಧನಾ ಲೇಖನಗಳು ಪ್ರಕಟವಾದವು. ದ್ರಾವಿಡ ಭಾಷಾವಿಜ್ಞಾನಕ್ಕೆ ಇವರ ಮತ್ತೊಂದು ಅಮೂಲ್ಯ ಕೊಡುಗೆಯೆಂದರೆ ಆಕ್ಸ್‍ಫರ್ಡಿನ ಟಿ. ಬರೋ ಅವರ ಜತೆಗೆ 1960 ರಲ್ಲಿ ಪ್ರಕಟಿಸಿದ 'ದ್ರಾವಿಡಿಯನ್ ಎಟಮೊಲಾಜಿಕಲ್ ಡಿಕ್ಷನರಿ ಅಥವಾ ದ್ರಾವಿಡಭಾಷಾ ವ್ಯುತ್ಪತ್ತಿ ಪದಕೋಶ ಪ್ರಕಟಣೆ. ಆರು ನೂರು ಪುಟಗಳುಳ್ಳ ಈ ಹೊತ್ತಗೆಯಲ್ಲಿ ದ್ರಾವಿಡ ಭಾಷೆಗಳಲ್ಲಿನ ನಾಲ್ಕೂವರೆ ಸಾವಿರ ಮೂಲಧಾತು ಮತ್ತು ಸುಮಾರು ಇಪ್ಪತ್ತು ಸೋದರಿ ಭಾಷೆಗಳಲ್ಲಿನ ಧಾತುಗಳಲ್ಲಿ ನಡೆದ ಪರಿವರ್ತನೆಗಳ ಸವಿಸ್ತಾರ ನಿರೂಪಣೆ ಇದೆ. ಗ್ರಾಂಥಿಕ ಭಾಷೆಗಳ ಪದಗಳನ್ನು ಮಾತ್ರವಲ್ಲದೇ ಎಮಿನೋ ಸಂಗ್ರಹಿಸಿದ ತೊದ, ಕೋತ, ಕೊಡವ, ಕೊಲಾಮಿ ಮುಂತಾದ ಭಾಷೆಗಳ ಪದಸಂಪತ್ತನ್ನು ಬರೋ ಸಂಗ್ರಹಿಸಿದರು. ಪರ್ಜಿ, ನಾಯಕಿ, ಗೊಂಡಿ, ಗದಬ ಇತ್ಯಾದಿ ಮಧ್ಯ ಹಾಗೂ ಉತ್ತರ ದ್ರಾವಿಡ ಭಾಷೆಗಳ ಪದ ಸಂಪತ್ತೂ ಇಲ್ಲಿ ಸಂಗ್ರಹವಾಗಿದ್ದು ದ್ರಾವಿಡ ಭಾಷೆಗಳ ಪರಸ್ಪರ ಸಂಬಂಧವನ್ನು ಕಲ್ಪಿಸಿಕೊಳ್ಳಲು ಸಹಾಯಕವಾಗಿದೆ. ಈ ಕಾರ್ಯಕ್ಕಾಗಿ ಈ ಇಬ್ಬರು ವಿದ್ವಾಂಸರೂ ಭಾರತ ದರ್ಶನವನ್ನು ಮಾಡಿದ್ದಲ್ಲದೇ ಬರೋ ಬಕ್ರ್ಲಿಗೂ ಎಮಿನೋ ಆಕ್ಸ್‍ಫರ್ಡಿಗೂ ಹೋಗಿ ಕೆಲವು ಕಾಲ ಜತೆಯಾಗಿ ಅಧ್ಯಯನ ಮಾಡಿ, ಕೆಲವು ಕಾಲ ಪತ್ರವ್ಯವಹಾರದ ಮೂಲಕ ಸಂಪಾದನ ಕಾರ್ಯ ನಡೆಸಿದರು. ಸುಮಾರು ಹತ್ತು ವರ್ಷಗಳ ಕಾಲದ ಅವಿರತ ಶ್ರಮದಿಂದ ದ್ರಾವಿಡ ಭಾಷಾ ವಿಜ್ಞಾನಕ್ಕೆ ಈ ಕಾಣಿಕೆಯನ್ನು ಅರ್ಪಿಸಿದ್ದಾರೆ. ಇದಾದ ಒಂದು ವರ್ಷದೊಳಗೆ ದ್ರಾವಿಡ ಭಾಷೆಗಳು ಎರವಲು ಪಡೆದ ಆರ್ಯ ಪದಗಳ ಕೃತಿಯನ್ನು ಟಿ. ಬರೋ ಅವರ ಜತೆ ಎಮಿನೋ ಪ್ರಕಟಿಸಿದರು.  ಅದೇ ವರ್ಷ ಬ್ರಾಹುಈ ಮತ್ತು ದ್ರಾವಿಡ ಭಾಷೆಗಳ ತೌಲನಿಕ ವ್ಯಾಕರಣ ಕೃತಿಗಳು ಪ್ರಕಟಗೊಂಡವು. ಎಮಿನೋ ಅವರ ಉತ್ತಮ ಕೃತಿಗಳು. ಇತರ ಸೋದರಿ ಭಾಷೆಗಳಿಗಿಂತ ಭೌಗೋಳಿಕವಾಗಿ ದೂರದಲ್ಲಿರುವ ಬಲೂಚಿಸ್ತಾನದಲ್ಲಿ ಪ್ರಚಾರದಲ್ಲಿರುವ ಬ್ರಾಹುಈ ಭಾಷೆಯ ಈ ಅಧ್ಯಯನ ದ್ರಾವಿಡ ಭಾಷಾವಿಜ್ಞಾನದ ಸಂಶೋಧನೆಯಲ್ಲಿ ಹೊಸದೊಂದು ಮೈಲಿಗಲ್ಲು. ಇದಲ್ಲದೆ ದ್ರಾವಿಡ ಭಾಷೆ, ವಂಶ, ಜನಪದ ಸಾಹಿತ್ಯ ಹಾಗೂ ಸಂಸ್ಕøತ ಭಾಷೆಗೆ ಸಂಬಂಧಪಟ್ಟ ನೂರಾರು ಲೇಖನಗಳನ್ನು ಇವರು ಪ್ರಕಟಿಸಿದ್ದಾರೆ. ಅಣ್ಣಾಮಲೈ ವಿಶ್ವವಿದ್ಯಾಲಯ ಪ್ರಕಟಿಸಿದ ಇವರ ಲೇಖನಗಳ ಸಂಗ್ರಹದಲ್ಲಿ ತೊದ, ಕೋತ ಮುಂತಾದ ಭಾಷೆಯನ್ನು ಕುರಿತ ಲೇಖನಗಳಲ್ಲದೆ `ಭಾರತ-ಒಂದು ಭಾಷಾಕ್ಷೇತ್ರ (ಇಂಡಿಯ-ಆಸ್ ಎ ಲಿಂಗ್ವಿಸ್ಟಿಕ್ ಏರಿಯ), `ಭಾರತ ಮತ್ತು ಭಾಷಾವಿಜ್ಞಾನ, (ಇಂಡಿಯ ಅಂಡ್ ಲಿಂಗ್ವಿಸ್ಟಿಕ್ಸ್), `ಭಾರತದ ಭಾಷೆಗಳ ಪೂರ್ವ ಇತಿಹಾಸ (ಲಿಂಗ್ವಿಸ್ಟಿಕ್ ಪ್ರಿ ಹಿಸ್ಟರಿ ಆಫ್ ಇಂಡಿಯ), `ದ್ರಾವಿಡ ಭಾಷೆಗಳ ಸಂಬಂಧೀ ಪದಗಳು (ದ್ರವಿಡಿಯನ್ ಕಿನ್‍ಷಿಪ್ ಟಮ್ರ್ಸ್)-ಮುಂತಾದ ಲೇಖನಗಳಿವೆ. 

	ಎಮಿನೋ ಅವರ ವಿದ್ವತ್ತಿನ ವ್ಯಾಪ್ತಿ ಸಂಸ್ಕøತ ಹಾಗೂ ದ್ರಾವಿಡ ಭಾಷೆಗಳಿಗೆ ಮಾತ್ರ ಸೀಮಿತವಾಗಿರಲಿಲ್ಲ. ವಿಯಟ್ನಾಮೀಸ್ ಭಾಷೆಯ ಅಧ್ಯಯನ ಮಾಡಿ ಅದರಲ್ಲಿ ಸೈನಿಕರಿಗೆ ಬೇಕಾದ ಬೋಧನಾ ಸಾಮಗ್ರಿಗಳನ್ನೂ ಇವರು ತಯಾರಿಸಿದ್ದಾರೆ. ಅಮೆರಿಕದ ಆದಿವಾಸಿಗಳ ಭಾಷಾ ಪರಿವೀಕ್ಷಣೆಯನ್ನೂ ನಡೆಸಿರುವರು. ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಬೋಧನೆ, ಮಾರ್ಗದರ್ಶನ ಮಾಡುವುದರ ಜತೆಗೆ ಸಂಶೋಧನಾ ಕ್ಷೇತ್ರಕ್ಕೂ ಸಾಕಷ್ಟು ಕಾಣಿಕೆಯ ನೀಯಿವರು ವಿದ್ವಾಂಸ ಆಚಾರ್ಯಶ್ರೇಷ್ಠರೆಂದೇ ಪರಿಗಣಿಸಲ್ಪಟ್ಟಿರುವರು.									  
   (ಯು.ಪಿ.ಯು.)
									(ಪರಿಷ್ಕರಣೆ: ಸಿ.ಎಸ್.ರಾಮಚಂದ್ರ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ